Latest

ಮತದಾರರ ಹೆಸರು ನೋಂದಣಿಗೆ ಇನ್ನೂ ಅವಕಾಶ-ಡಾ.ಬೊಮ್ಮನಹಳ್ಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

Home add -Advt

ಯಾವುದೇ ಅರ್ಹ ವ್ಯಕ್ತಿಯು ಮತದಾನದ ಹಕ್ಕಿನಿಂದ ವಂಚಿತಗೊಳ್ಳಬಾರದು ಎಂಬ ಆಶಯದೊಂದಿಗೆ ಚುನಾವಣಾ ಆಯೋಗವು ವಿವಿಧ ಬಗೆಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಪ್ರತಿಯೊಬ್ಬರೂ ಮತ ಚಲಾಯಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಕರೆ ನೀಡಿದರು.
ಮತದಾನ ಕುರಿತು ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನಗರದಲ್ಲಿ ಶನಿವಾರ(ಮಾ.೯) ಏರ್ಪಡಿಸಲಾಗಿದ್ದ ವಿಕಲಚೇತನರ ಬೈಕ್ ರ‍್ಯಾಲಿಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಈಗಾಗಲೇ ಅರ್ಹ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಈಗಲೇ ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಹೊಸದಾಗಿ ಹೆಸರು ಸೇರ್ಪಡಗೆ ಈಗಲೂ ಅವಕಾಶವಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಹಾಗೂ ಮತದಾನದ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಸಿಕೊಡುತ್ತಿರುವ ವಿಕಲಚೇತನರ ಕೆಲಸ ಎಲ್ಲರಿಗೂ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದರು.
ಲೋಕಸಭೆ ಚುನಾವಣೆ ಯಾವುದೇ ಕ್ಷಣದಲ್ಲೂ ಘೋಷಣೆಯಾಗಬಹುದು. ಎಲ್ಲರೂ ಮತದಾನದಲ್ಲಿ ಭಾಗವಹಿಸಬೇಕು. ಅಷ್ಟೇ ಅಲ್ಲದೆ ನೆರೆಹೊರೆಯವರಿಗೂ ಮತ್ತು ಯುವಜನರಿಗೆ ಮತದಾನಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಅವರು ಮನವಿ ಮಾಡಿಕೊಂಡರು.

ಇದೇ ವೇಳೆ ಮಾತನಾಡಿದ ಪೊಲೀಸ್ ಆಯುಕ್ತ ಲೋಕೇಶ್ ಕುಮಾರ್ ಅವರು, ತಮ್ಮ ಹಕ್ಕು ಚಲಾಯಿಸಲು ಎಲ್ಲರೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಈಗಲೇ ಖಚಿತಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪ ಹೆಚ್.ಬಿ., ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪ್ರೀತಮ್ ನಸ್ಲಾಪುರೆ, ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿ ದುಡಗುಂಟಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ನಾಮದೇವ ಬಿಲ್ಕರ್ ಮತ್ತಿತರರು ಉಪಸ್ಥಿತರಿದ್ದರು.


ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭಗೊಂಡ ಬೈಕ್ ಜಾಥಾ ಕಿತ್ತೂರು ಚನ್ನಮ್ಮ ವೃತ್ತ, ಕೊಲ್ಲಾಪುರ ವೃತ್ತದ ಮೂಲಕ ಕುಮಾರ ಗಂಧರ್ವ ರಂಗಮಂದಿರ ತಲುಪಿತು. ಜಿಲ್ಲೆಯಿಂದ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಜನರು ಮತದಾನ ಕುರಿತು ಜಾಗೃತಿ ಮೂಡಿಸಿದರು.

ಇದಾದ ಬಳಿಕ ರಂಗಮಂದಿರದಲ್ಲಿ ಇವಿಎಂ ಹಾಗೂ ವಿವಿಪ್ಯಾಟ್ ಕುರಿತು ಪ್ರಾತ್ಯಕ್ಷಿಕೆಯನ್ನು ನಡೆಸಿಕೊಡಲಾಯಿತು.

Related Articles

Back to top button