NationalPolitics

*ಕೊಯಮತ್ತೂರಿನ ವಿವಿಧೆಡೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಪ್ರಚಾರ*

5 ದಿನಗಳಿಂದ ಕೊಯಮತ್ತೂರಿನಲ್ಲಿ ಬೀಡುಬಿಟ್ಟಿರುವ ಸಚಿವರು

ಪ್ರಗತಿವಾಹಿನಿ ಸುದ್ದಿ: ಕೊಯಮತ್ತೂರು: ತಮಿಳುನಾಡು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್‌ ಅವರು, ಕೊಯಮತ್ತೂರು ಜಿಲ್ಲೆಯ ವಿವಿಧೆಡೆ ಸಂಚರಿಸಿ ಕಾಂಗ್ರೆಸ್‌ – ಡಿಎಂಕೆ ಮೈತ್ರಿಕೂಟದ ಅಭ್ಯರ್ಥಿಗಳ ಪರ ಮತಯಾಚಿಸುತ್ತಿದ್ದಾರೆ.

ಕಳೆದ 5 ದಿನಗಳಿಂದ ಕೊಯಮತ್ತೂರಿನಲ್ಲಿ ಬೀಡುಬಿಟ್ಟಿರುವ ಸಚಿವರು, ಸ್ಥಳೀಯ ನಾಯಕರು, ಕಾರ್ಯಕರ್ತರೊಂದಿಗೆ ಸರಣಿ ಸಭೆಗಳನ್ನು ಆಯೋಜಿಸಿ ಅಭಿಪ್ರಾಯ ಸಂಗ್ರಹಿಸುವ ಮೂಲಕ ಚುನಾವಣಾ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಕಾವುಂಡಪಾಳ್ಯಂ ಕ್ಷೇತ್ರದ ಅಭ್ಯರ್ಥಿ ಸೂರ್ಯಪ್ರಕಾಶ್‌ ಪರ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಮತಯಾಚಿಸುತ್ತಿದ್ದಾರೆ.

ಕಾಂಗ್ರೆಸ್‌ ಸಾಧನೆ ಗುರುತಿಸಿ ಮತನೀಡಿ
ಹಿಂದಿನ ಯುಪಿಎ ಸರ್ಕಾರ ಹಾಗೂ ಕಾಂಗ್ರೆಸ್‌ ಪಕ್ಷ ಕೈಗೊಂಡಿರುವ ಜನಪರ ಯೋಜನೆಗಳನ್ನು ಜನರಿಗೆ ವಿವರಿಸುತ್ತಿರುವ ಸಚಿವರು, ತಮಿಳುನಾಡಿನ ಜನತೆ ಮತದಾನ ಮಾಡುವುದಕ್ಕೂ ಮುನ್ನ ಯೋಚಿಸಿ ಮತದಾನ ಮಾಡಿ. ಕಾಂಗ್ರೆಸ್-‌ ಡಿಎಂಕೆ ಮೈತ್ರಿಕೂಟಕ್ಕೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

Home add -Advt

ಕಳೆದ 12 ವರ್ಷಗಳಿಂದ ಅಗತ್ಯವಸ್ತುಗಳ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಜನ ಸಾಮಾನ್ಯರು ತತ್ತರಿಸುವಂತೆ ಮಾಡಿದೆ. ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ 400 ರೂಪಾಯಿ ಇದ್ದ ಸಿಲಿಂಡರ್‌ ಬೆಲೆ ಇಂದು ಸಾವಿರ ರೂಪಾಯಿ ಗಡಿದಾಟಿದೆ. ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಅನುಕೂಲ ಮಾಡುವ ಬದಲಿಗೆ ಶ್ರೀಮಂತರಿಗಷ್ಟೇ ಸೀಮಿತವಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ಉತ್ತರದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಅಲ್ಲಿನ ಸರಕಾರಗಳು ತಮ್ಮ ರಾಜ್ಯಗಳ ಜನರಿಗೆ ಉದ್ಯೋಗಾವಕಾಶ ಒದಗಿಸುವಲ್ಲಿ ವಿಫಲಗೊಂಡಿವೆ. ಹೀಗಾಗಿ ಉತ್ತರ ಭಾರತದ ಜನರು ದಕ್ಷಿಣ ರಾಜ್ಯಗಳತ್ತ ಉದ್ಯೋಗಕ್ಕಾಗಿ ಬರುತ್ತಿದ್ದಾರೆ. ಆದರೆ, ದಕ್ಷಿಣ ರಾಜ್ಯಗಳಿಗೆ ಹಂಚಬೇಕಾದ ತೆರಿಗೆ ಪಾಲನ್ನು ಉತ್ತರ ರಾಜ್ಯಗಳಿಗೆ ನೀಡುವ ಮೂಲಕ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಕೇಂದ್ರ ಸರ್ಕಾರ ವಿರುದ್ಧ ಆರೋಪಿಸಿದರು.

ಯುಪಿಎ ಸರ್ಕಾರದ ಯೋಜನೆಗಳ ಹೆಸರಗಳನ್ನು ಬದಲಿಸುವುದು, ನಗರ, ಪಟ್ಟಣಗಳ ಹೆಸರನ್ನು ಬದಲಿಸುವುದನ್ನು ಬಿಟ್ಟರೆ ಕೇಂದ್ರ ಸರ್ಕಾರ ಯಾವುದೇ ಜನಪರ ಕೆಲಸಗಳನ್ನು ಮಾಡಿಲ್ಲ ಎಂದರು.

ಮಹಾತ್ಮಗಾಂಧಿ ತತ್ವಗಳನ್ನು ಆದರ್ಶವಾಗಿಟ್ಟುಕೊಂಡು ಕಾಂಗ್ರೆಸ್‌ ಪಕ್ಷ ಕೆಲಸ ಮಾಡುತ್ತಿದ್ದರೆ, ಬಿಜೆಪಿಗರು ಬ್ರಿಟಿಷ್‌ ಸಂಸ್ಕೃತಿಯನ್ನು ಅನುಸರಿಸುತ್ತಿದ್ದು, ಜಾತಿ, ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿದ್ದಾರೆ. ಡಿಎಂಕೆ ಮುಖ್ಯಸ್ಥ ಸ್ಟಾಲಿನ್‌, ಕಾಂಗ್ರೆಸ್‌ ನೇತಾರರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್‌ ಗಾಂಧಿ ಸಾರಥ್ಯದ ಇಂಡಿಯಾ ಒಕ್ಕೂಟ ಮತ್ತೊಮ್ಮೆ ತಮಿಳುನಾಡಿನಲ್ಲಿ ಸರ್ಕಾರ ರಚಿಸಲಿದೆ. ಮತದಾನ ಮಾಡುವುದಕ್ಕೂ ಮುನ್ನ ಮತದಾರರು ಸೂಕ್ಷ್ಮವಾಗಿ ಯೋಚಿಸಿ ಮತದಾನ ಮಾಡಬೇಕು ಎಂದು ಸಚಿವರು ಹೇಳಿದರು.

ಸಚಿವರಿಗೆ ಹಿರಿಯ ನಾಯಕರು ಸಾಥ್‌
ತೆಲಂಗಾಣದ ಸಚಿವರಾದ ಉತ್ತಮ್‌ಕುಮಾರ್‌ ರೆಡ್ಡಿ, ಗೋವಿಂದರಾಜನಗರದ ಶಾಸಕ ಪ್ರಿಯಾ ಕೃಷ್ಣ ಹಾಗೂ ಕೊಯಮತ್ತೂರು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ವಿಜಯ್‌ಕುಮಾರ್‌ ಸೇರಿದಂತೆ ಹಲವು ಮುಖಂಡರು ಪ್ರಚಾರದ ವೇಳೆ ಸಾಥ್‌ ನೀಡಿದರು. ರೋಡ್‌ ಶೋ ಜೊತೆಗೆ ಕೊಯಮತ್ತೂರು ಜಿಲ್ಲೆಯ ಕಾವುಂಡಪಾಳ್ಯಂ ಕ್ಷೇತ್ರದ ವಿವಿಧ ಪ್ರದೇಶಗಳಿಗೆ ಉರಿ ಬಿಸಿಲನ್ನು ಲೆಕ್ಕಿಸದೆ ಕಾಂಗ್ರೆಸ್‌ ಅಭ್ಯರ್ಥಿ ಪರ ಮತಯಾಚಿಸುತ್ತಿದ್ದಾರೆ. ಹಿಂದಿನ ಯುಪಿಎ ಸರ್ಕಾರದಲ್ಲಿ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಮತದಾರರಿಗೆ ಸವಿಸ್ತಾರವಾಗಿ ವಿವರಿಸುವ ಮೂಲಕ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಅವರು ಗಮನಸೆಳೆಯುತ್ತಿದ್ದಾರೆ.

Related Articles

Back to top button