*ಉಚಿತ ದೃಷ್ಟಿ ತಪಾಸಣೆ ಶಿಬಿರ ಹಾಗೂ ಕನ್ನಡಕ ವಿತರಣೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಸವನ ಕುಡುಚಿಯಲ್ಲಿರುವ ಶ್ರೀ ನಾಗನೂರು ಸ್ವಾಮಿಗಳ ಚಿನ್ನಮ್ಮ ಬಿ. ಹಿರೇಮಠ ವೃದ್ಧಾಶ್ರಮದಲ್ಲಿ ಎನ್ಎಸ್ಎಸ್ ಟ್ರಸ್ಟ್, ಅಲೋಕ ವಿಷನ್ ಪ್ರೋಗ್ರಾಮ್ (Carl Zeiss), ಪ್ರಯತ್ನ ಸಂಸ್ಥೆ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಉಚಿತ ದೃಷ್ಟಿ ತಪಾಸಣೆ ಶಿಬಿರವನ್ನು ಆಯೋಜಿಸಿ, ಅಗತ್ಯವಿರುವ ಫಲಾನುಭವಿಗಳಿಗೆ ಕನ್ನಡಕಗಳನ್ನು ಉಚಿತವಾಗಿ ವಿತರಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಯೋಗತಜ್ಞ ಶ್ರೀ ನಿರಂಜನ ಮಹಾಸ್ವಾಮಿಗಳು ನೆರವೇರಿಸಿ ಮಾತನಾಡಿ, ಹಿರಿಯ ನಾಗರಿಕರ ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಇಂತಹ ಆರೋಗ್ಯ ಸೇವಾ ಕಾರ್ಯಕ್ರಮಗಳು ಅತ್ಯಂತ ಉಪಯುಕ್ತವಾಗಿವೆ ಎಂದು ತಿಳಿಸಿದರು. ಸೇವಾ ಮನೋಭಾವದಿಂದ ಸಮಾಜದ ದುರ್ಬಲ ವರ್ಗಗಳಿಗೆ ಸಹಾಯ ಮಾಡುವ ಸಂಸ್ಥೆಗಳ ಕಾರ್ಯ ಶ್ಲಾಘನೀಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಯತ್ನ ಸಂಸ್ಥೆಯ ಅಧ್ಯಕ್ಷೆ ಶಾಂತಾ ಆಚಾರ್ಯ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮಗಳ ಅಗತ್ಯತೆ ತಿಳಿಸಿ, ಕಣ್ಣಿನ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿದರೆ ಗಂಭೀರ ಸಮಸ್ಯೆಗಳನ್ನು ತಡೆಯಬಹುದು ಎಂದು ತಿಳಿಸಿದರು.
ಶಿಬಿರದಲ್ಲಿ ಕಣ್ಣಿನ ತಜ್ಞರಿಂದ ಹಿರಿಯ ನಾಗರಿಕರು ಹಾಗೂ ಸಾರ್ವಜನಿಕರಿಗೆ ಸಮಗ್ರ ದೃಷ್ಟಿ ತಪಾಸಣೆ ನಡೆಸಲಾಯಿತು. ದೃಷ್ಟಿದೋಷ ಹೊಂದಿರುವ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು. ಹಿರಿಯ ನಾಗರಿಕರಿಗೆ ಕಣ್ಣಿನ ಆರೈಕೆ, ಸಮಯಕ್ಕೆ ಸರಿಯಾಗಿ ತಪಾಸಣೆ ಮಾಡಿಸಿಕೊಳ್ಳುವ ಅಗತ್ಯತೆ ಹಾಗೂ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಮಾಹಿತಿ ನೀಡಲಾಯಿತು.
80ಕ್ಕೂ ಅಧಿಕ ಹಿರಿಯ ನಾಗರಿಕರು ಹಾಗೂ ಸಾರ್ವಜನಿಕರು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು. ಕಾರ್ಯಕ್ರಮದಲ್ಲಿ ವೃದ್ಧಾಶ್ರಮದ ಸಂಯೋಜಕ ಎಂ.ಎಸ್. ಚೌಗಲಾ, ಡಾ. ನಾಗಲೋಟಿಮಠ ವಿಜ್ಞಾನ ಕೇಂದ್ರದ ರಾಜಶೇಖರ ಪಾಟೀಲ, ಕುಮಾರಿ ಪೂರ್ಣಿಮಾ , ಅಲ್ಲಾಭಕ್ಷ ಉಪಸ್ಥಿತರಿದ್ದರು.



