
ಪ್ರಗತಿವಾಹಿನಿ ಸುದ್ದಿ: ಉತ್ತರ ಪ್ರದೇಶದ ರಾಜಕೀಯ ರಣಕಣದಲ್ಲಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಅವರ ಹೇಳಿಕೆಗಳು ಹೊಸ ಚರ್ಚೆಗೆ ಕಾರಣವಾಗಿವೆ. ದಶಕಗಳಿಂದ ಕಾಂಗ್ರೆಸ್ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳನ್ನು ಬೆಂಬಲಿಸುತ್ತಿರುವ ಮುಸ್ಲಿಂ ಸಮುದಾಯವು ಇನ್ನು ಮುಂದೆ ತನ್ನದೇ ನಾಯಕತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. ಗಾಂಧಿ ಮತ್ತು ನೆಹರೂ ಕುಟುಂಬದ ನಾಯಕರ ಹಿಂದೆ ನಡೆದಿದ್ದು ಸಾಕು ಎಂದು ಹೇಳಿರುವ ಒವೈಸಿ, ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸುವ ಸ್ವಂತ ನಾಯಕರ ಅಗತ್ಯವನ್ನು ಪ್ರತಿಪಾದಿಸಿದ್ದಾರೆ.
ಉತ್ತರ ಪ್ರದೇಶದ ಅಜಂಗಢದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಒವೈಸಿ, ಮುಸ್ಲಿಂ ಸಮುದಾಯವು ಹಲವು ವರ್ಷಗಳಿಂದ ಕಾಂಗ್ರೆಸ್ ಮತ್ತು ಇತರ ಪ್ರಮುಖ ರಾಜಕೀಯ ಪಕ್ಷಗಳನ್ನು ಬೆಂಬಲಿಸುತ್ತಾ ಬಂದಿದೆ. ಆದರೆ, ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ಅದರೊಳಗಿನಿಂದಲೇ ನಾಯಕರನ್ನು ಬೆಳೆಸುವ ಕೆಲಸ ಸಮರ್ಪಕವಾಗಿ ನಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗಾಂಧಿ ಮತ್ತು ನೆಹರೂ ಕುಟುಂಬದ ಹೆಸರಿನಲ್ಲಿ ರಾಜಕೀಯ ಪಕ್ಷಗಳನ್ನು ಬೆಂಬಲಿಸುವುದು ಸಾಕು ಎಂದಿರುವ ಅವರು, ನಮ್ಮ ಬೆಂಬಲದಿಂದ ಇತರ ನಾಯಕರು ಬೆಳೆದಿದ್ದಾರೆ. ಆದರೆ, ನಮ್ಮ ಸಮುದಾಯದ ಸಾಮಾನ್ಯ ಜನರಿಂದ ನಾಯಕತ್ವ ರೂಪುಗೊಳ್ಳಲು ಅವಕಾಶ ಸಿಕ್ಕಿದೆಯೇ ಎಂಬುದನ್ನು ಪ್ರಶ್ನಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
“ನಮಗೆ ಯಾವುದೇ ಮಾದರಿ ನಾಯಕರ ಅಗತ್ಯವಿಲ್ಲ. ನಮ್ಮ ಸಮುದಾಯದ ಸಾಮಾನ್ಯ ವ್ಯಕ್ತಿಯೇ ನಾಯಕನಾಗಬೇಕು. ನಮ್ಮವರೇ ನಾಯಕರಾದರೆ ನಮ್ಮ ಹಳ್ಳಿಗಳ ಮತ್ತು ಗಲ್ಲಿಗಳ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ” ಎಂಬ ಸಂದೇಶವನ್ನು ಒವೈಸಿ ನೀಡಿದ್ದಾರೆ.
ಮುಸ್ಲಿಂ ಸಮುದಾಯವು ಕೇವಲ ಚುನಾವಣೆಯಲ್ಲಿ ಮತ ಚಲಾಯಿಸುವ ಗುಂಪಾಗಿ ಉಳಿಯಬಾರದು. ತನ್ನ ರಾಜಕೀಯ ಶಕ್ತಿಯನ್ನು ಗುರುತಿಸಿಕೊಂಡು ಸ್ವತಂತ್ರ ನಾಯಕತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. “ನಾವು ಯಾರಿಗೂ ಜೀತದಾಳುಗಳಲ್ಲ” ಎಂಬ ಮಾತಿನ ಮೂಲಕ ರಾಜಕೀಯ ಪಕ್ಷಗಳ ಮೇಲೆ ಅವಲಂಬಿತರಾಗದೆ ತಮ್ಮದೇ ನಾಯಕತ್ವವನ್ನು ರೂಪಿಸಿಕೊಳ್ಳುವ ಅಗತ್ಯವನ್ನು ಒತ್ತಿಹೇಳಿದ್ದಾರೆ.
ಒವೈಸಿ ಅವರ ಈ ಹೇಳಿಕೆ ಕಾಂಗ್ರೆಸ್ ಮಾತ್ರವಲ್ಲದೆ ಸಮಾಜವಾದಿ ಪಕ್ಷದ ರಾಜಕೀಯವನ್ನೂ ಗುರಿಯಾಗಿಸಿಕೊಂಡಿದೆ. ಉತ್ತರ ಪ್ರದೇಶದಲ್ಲಿ ಮುಸ್ಲಿಂ ಮತದಾರರ ಬೆಂಬಲವನ್ನು ಪಡೆಯಲು ಪ್ರಯತ್ನಿಸುತ್ತಿರುವ ಪ್ರಮುಖ ಪಕ್ಷಗಳ ರಾಜಕೀಯ ತಂತ್ರಗಳಿಗೆ ಅವರ ಈ ಕರೆ ಸವಾಲಾಗಬಹುದು ಎಂಬ ಚರ್ಚೆ ಆರಂಭವಾಗಿದೆ.
ಚುನಾವಣಾ ಆಯೋಗದ ಕಾರ್ಯವೈಖರಿ, ಮತದಾರರ ಪಟ್ಟಿಯ ಪರಿಷ್ಕರಣೆ ಮತ್ತು ಅಲ್ಪಸಂಖ್ಯಾತರ ರಾಜಕೀಯ ಪ್ರಾತಿನಿಧ್ಯದ ಕುರಿತು ದೇಶಾದ್ಯಂತ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಒವೈಸಿ ಅವರ ಹೇಳಿಕೆ ಮಹತ್ವ ಪಡೆದಿದೆ. ಮುಸ್ಲಿಂ ಸಮುದಾಯವು ತನ್ನದೇ ನಾಯಕತ್ವವನ್ನು ಬೆಳೆಸಿಕೊಳ್ಳದಿದ್ದರೆ ರಾಜಕೀಯವಾಗಿ ಹಿಂದುಳಿಯುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದ್ದಾರೆ. ಈ ಹೇಳಿಕೆಗಳು ಉತ್ತರ ಪ್ರದೇಶದ ಮುಂಬರುವ ಚುನಾವಣಾ ರಾಜಕೀಯದಲ್ಲಿ ಯಾವ ರೀತಿಯ ಪರಿಣಾಮ ಬೀರುತ್ತವೆ ಎಂಬುದು ಮುಂದಿನ ಬೆಳವಣಿಗೆಗಳಲ್ಲಿ ಸ್ಪಷ್ಟವಾಗಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



