*ಬೆಳಗಿನ 3 ಗಂಟೆಯಾದರೂ ಫನ್ ವರ್ಲ್ಡ್ನಲ್ಲಿ ಪಟಾಕಿ ಸದ್ದು*: *ನಟಿ ರಮ್ಯಾ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನಲ್ಲಿ ತಡರಾತ್ರಿಯ ಶಬ್ದ ಮಾಲಿನ್ಯದ ವಿರುದ್ಧ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಳಗಿನ ಜಾವ 3 ಗಂಟೆಯಾದರೂ ಫನ್ ವರ್ಲ್ಡ್ ಆವರಣದಲ್ಲಿ ಪಟಾಕಿ ಸಿಡಿಸಿ, ಜೋರಾಗಿ ಸಂಗೀತ ಹಾಕುತ್ತಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ರಮ್ಯಾ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು, ತಡರಾತ್ರಿಯವರೆಗೂ ಇಂತಹ ಶಬ್ದ ಮಾಡುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ ಎಂದು ಹೇಳಿದ್ದಾರೆ. ಹಬ್ಬಗಳ ಸಂದರ್ಭದಲ್ಲಿ ಸ್ವಲ್ಪಮಟ್ಟಿನ ವಿನಾಯಿತಿ ನೀಡುವುದನ್ನು ಒಪ್ಪಬಹುದು. ಆದರೆ, ನಸುಕಿನ ಜಾವದವರೆಗೂ ಪಟಾಕಿ ಮತ್ತು ಜೋರಾದ ಸಂಗೀತ ಮುಂದುವರಿಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಫನ್ ವರ್ಲ್ಡ್ ಸುತ್ತಮುತ್ತ ಆಸ್ಪತ್ರೆಗಳಿದ್ದು, ವೃದ್ಧರು, ಚಿಕ್ಕ ಮಕ್ಕಳು ಮತ್ತು ರೋಗಿಗಳು ವಾಸಿಸುತ್ತಿದ್ದಾರೆ. ಇಂತಹವರಿಗೆ ತಡರಾತ್ರಿಯ ಶಬ್ದದಿಂದ ತೀವ್ರ ತೊಂದರೆಯಾಗಬಹುದು ಎಂದು ರಮ್ಯಾ ಕಳವಳ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ನೆಮ್ಮದಿ ಮತ್ತು ಆರೋಗ್ಯದ ಬಗ್ಗೆ ಗಮನಹರಿಸಬೇಕು ಎಂದು ಹೇಳಿದ್ದಾರೆ.
ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳ ಪ್ರಕಾರ, ಸಾಮಾನ್ಯವಾಗಿ ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಧ್ವನಿವರ್ಧಕಗಳ ಬಳಕೆಗೆ ನಿರ್ಬಂಧವಿದೆ. ಕೆಲವು ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂದರ್ಭಗಳಲ್ಲಿ ರಾತ್ರಿ 12 ಗಂಟೆಯವರೆಗೆ ಸೀಮಿತ ವಿನಾಯಿತಿ ನೀಡಲು ಅವಕಾಶವಿದ್ದರೂ, ಅದು ಸರ್ಕಾರದ ಅನುಮತಿ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ. ರಾತ್ರಿಯಲ್ಲಿ ಶಬ್ದ ಉಂಟುಮಾಡುವ ಪಟಾಕಿಗಳಿಗೂ ನಿರ್ಬಂಧಗಳಿವೆ. ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ರಮ್ಯಾ ಒತ್ತಾಯಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



