*ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ…* *ದೇಶಕ್ಕೆ ಹೊಸ ಬೆಳಕನ್ನು ನೀಡಲಿ ಗಾಂಧೀ ಭಾರತ*
ಲಕ್ಷ್ಮೀ ಹೆಬ್ಬಾಳಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು
1924- ಅಂದು ಜೀವಿತವಿದ್ದ ಬೆಳಗಾವಿಗರ ಪಾಲಿಗೆ ಎಂತಹ ಪುಣ್ಯಕಾಲ. ಈ ದೇಶದ ಮಹಾತ್ಮಾ ಎನಿಸಿಕೊಂಡವರ ಜೊತೆಗೆ ಎಂತೆಂತಹ ಮಹಾನ್ ನಾಯಕರ ಪಾದ ಸ್ಪರ್ಷದಿಂದ ಬೆಳಗಾವಿಯ ನೆಲ ಪವಿತ್ರವಾದ ಸಮಯವದು. ನಾವು ಅಂದು ಜೀವಿಸಿರಲಿಲ್ಲ, ಆದರೆ ಆ ಪರ್ವ ಕಾಲದ ಶತಮಾನೋತ್ಸವ ಕಾರ್ಯಕ್ರಮದ ಈ ಸಂದರ್ಭದಲ್ಲಿ ನಾವು ಜೀವಿತವಿರುವುದು ನಮ್ಮ ಪಾಲಿಗೆ ಬಹುದೊಡ್ಡ ಭಾಗ್ಯ ಎಂದೇ ಭಾವಿಸುತ್ತೇನೆ.
ಭಾರತ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದ ಕಥೆಯನ್ನು ಕೇಳಿದರೆ ನಮಗೆಲ್ಲ ಮೈ ರೋಮಾಂಚನವಾಗುತ್ತದೆ. ಒಬ್ಬೊಬ್ಬರು ಹೋರಾಡಿದ ರೀತಿ, ಮಾಡಿದ ತ್ಯಾಗವನ್ನು ಸ್ಮರಿಸಿಕೊಂಡರೆ ನಮ್ಮಲ್ಲಿ ಸ್ಫೂರ್ತಿ ಉಕ್ಕಿ ಹರಿಯುತ್ತದೆ. ಅಂತಹ ಮಾಹಾನ್ ಹೋರಾಟಗಾರರು, ತ್ಯಾಗಿಗಳು ಬೆಳಗಾವಿ ನೆಲಕ್ಕೆ ಕಾಲಿಟ್ಟಿದ್ದರು, ಇಲ್ಲಿಯೇ ಸ್ವಾತಂತ್ರ್ಯ ಹೋರಾಟದ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಂಡರು, ತನ್ಮೂಲಕ ಹಲವಾರು ಆದರ್ಶಗಳನ್ನು ಇಲ್ಲಿ ಉಳಿಸಿಹೋದರು, ಅದೇ ನೆಲದಲ್ಲಿ ಸರಿಯಾಗಿ 100 ವರ್ಷದ ಈ ಸಂದರ್ಭದಲ್ಲಿ ನಾವೆಲ್ಲ ಬದುಕಿದ್ದೇವೆ, ಆ ಮಹಾನ್ ಘಳಿಗೆಯ ಶತಮಾನೋತ್ಸವವನ್ನು ಆಚರಿಸುತ್ತಿದ್ದೇವೆ ಎಂದರೆ ಇದು ಪುಣ್ಯವಲ್ಲದೇ ಮತ್ತಿನ್ನೇನು?
ರಾಷ್ಟ್ರೀಯ ಕಾಂಗ್ರೆಸ್ ನ 39ನೇ ಅಧಿವೇಶನ ಬೆಳಗಾವಿಯಲ್ಲಿ 1924ರ ಡಿಸೆಂಬರ್ 26 ಮತ್ತು 27ರಂದು ನಡೆದಿತ್ತು. ಮಹಾತ್ಮಾ ಗಾಂಧೀಜಿಯವರು ಈ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಅಧಿವೇಶನ ಬೆಳಗಾವಿಯದ್ದು ಎನ್ನುವುದೇ ನಮಗೆಲ್ಲ ದೊಡ್ಡ ಹೆಮ್ಮೆ.
ಬೆಳಗಾವಿಯಲ್ಲಿ ಅಧಿವೇಶನವನ್ನು ನಡೆಸಬೇಕೆನ್ನುವ ತೀರ್ಮಾನದಿಂದ ಆರಂಭವಾಗಿ, ಅಧಿವೇಶನವನ್ನು ಸಂಘಟಿಸಿದ ರೀತಿ ಹಾಗೂ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಮಹಾ ಪುರುಷರೆಲ್ಲ ನಡೆದುಕೊಂಡ ರೀತಿ, ಅಧಿವೇಶನದಲ್ಲಿನ ಆರ್ಥಿಕ ಶಿಸ್ತು ಎಲ್ಲವೂ ನಮಗೆ ಆದರ್ಶ.
ಬೆಳಗಾವಿಗೆ ಬಂದಿದ್ದು ಹೇಗೆ?
ಕರ್ನಾಟಕದಲ್ಲಿ 39ನೇ ಅಧಿವೇಶನ ನಡೆಸಬೇಕೆನ್ನುವ ತೀರ್ಮಾನ 38ನೇ ಅಧಿವೇಶನದಲ್ಲೇ ಆಯಿತು. ಆದರೆ ಕರ್ನಾಟಕದ ಯಾವ ಭಾಗದಲ್ಲಿ ಎನ್ನುವ ನಿರ್ಣಯ ಆಗಿರಲಿಲ್ಲ. ಮಂಗಳೂರು, ಹುಬ್ಬಳ್ಳಿ ಸೇರಿದಂತೆ ವಿವಿಧ ಭಾಗದ ಜನರು ತಮ್ಮಲ್ಲೇ ಅಧಿವೇಶನ ನಡೆಯಬೇಕು ಎಂದುಪಟ್ಟು ಹಿಡಿದರು.
ಆದರೆ ಬೆಳಗಾವಿಯ ಗಂಗಾಧರ ರಾವ್ ದೇಶಪಾಂಡೆ ಅವರ ವ್ಯಕ್ತಿತ್ವ, ಅವರ ಶಿಸ್ತು, ಪ್ರಾಮಾಣಿಕತೆ, ಮಹಾತ್ಮಾ ಗಾಂಧೀಜಿಯವರೊಂದಿಗಿನ ಒಡನಾಟ ಇವೆಲ್ಲ ಅಧಿವೇಶನವನ್ನು ಬೆಳಗಾವಿಗೆ ಹೊತ್ತು ತಂದಿತು.
ಅಷ್ಟೇ ಅಚ್ಚುಕಟ್ಟುತನದಿಂದ ಅಧಿವೇಶನ ಸಂಘಟಿಸುವ ಮೂಲಕ ಗಂಗಾಧರ ರಾವ್ ದೇಶಪಾಂಡೆ ಎಲ್ಲರ ಮೆಚ್ಚುಗೆಗೆ ಪಾತ್ರರಾದರು, ಬೆಳಗಾವಿಗೊಂದು ಹೆಸರು ತಂದುಕೊಟ್ಟರು. ವಿವಿಧ ಸಮಿತಿಗಳನ್ನು ರಚಿಸಿ, ಸ್ವತಃ ಕುದುರೆಯ ಮೇಲೆ ಓಡಾಡಿ ಅಧಿವೇಶನದ ಸಿದ್ಧತೆಗಳನ್ನು ಪರಿಶೀಲಿಸಿದ್ದಲ್ಲದೆ, ಪೈಸೆ ಪೈಸೆ ಲೆಕ್ಕವನ್ನೂ ಒಪ್ಪಿಸುವ ಮೂಲಕ ಪ್ರಾಮಾಣಿಕತೆ, ಆರ್ಥಿಕ ಶಿಸ್ತಿಗೆ ಸಾಕ್ಷಿಯಾದರು. ಇಡೀ ಸಮ್ಮೇಳನಕ್ಕೆ 2,20,820 ರೂ. 5 ಆಣೆ 6 ಪೈ ಸಂಗ್ರಹವಾಗಿತ್ತು. ಅದರಲ್ಲಿ 772 ರೂ. ಒಂದು ಆಣೇ 6 ಪೈ ಉಳಿಯಿತು.
ಅಧಿವೇಶನದ ಆಶಯಗಳು
2 ದಿನ ನಡೆದ ಬೆಳಗಾವಿ ಅಧಿವೇಶನದ ಆಶಯ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕನ್ನು ತೋರಿಸಿಕೊಟ್ಟಿತು. ಸ್ವಾತಂತ್ರ್ಯ ಚಳವಳಿ ಹಿಂಸಾ ಮಾರ್ಗದಲ್ಲಿರಬೇಕೆಂದು ಕೆಲವರು ಪ್ರತಿಪಾದಿಸುತ್ತಿದ್ದ ಕಾಲಘಟ್ಟದಲ್ಲಿ ಬೆಳಗಾವಿ ಅಧಿವೇಶನ ನಡೆಯಿತು. ಆದರೆ, ಯಾವುದೇ ಕಾರಣದಿಂದ ಅಹಿಂಸಾ ಮಾರ್ಗ ಬಿಟ್ಟು ಹೋಗಬಾರದೆನ್ನುವ ಗಟ್ಟಿ ನಿರ್ಧಾರ ತಳೆದಿದ್ದು ಬೆಳಗಾವಿ ಅಧಿವೇಶನ.
ಅಸ್ಪೃಶ್ಯತಾ ನಿವಾರಣೆಗೆ ಬಲವಾದ ತಳಹದಿ ಹಾಕಿಕೊಟ್ಟಿದ್ದು ಬೆಳಗಾವಿ ಅಧಿವೇಶನ. ಜಾತಿ, ಧರ್ಮ, ಭಾಷೆ ಎಲ್ಲ ಭೇಧಗಳನ್ನು ದೂರ ಮಾಡಿ, ಭಾರತೀಯರೆಲ್ಲ ಒಂದಾಗಿ ಹೋರಾಡಬೇಕೆನ್ನುವ ಸಂದೇಶವನ್ನು ಬೆಳಗಾವಿ ಅಧಿವೇಶನ ನೀಡಿತು. ಮಹಿಳೆಯರು, ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಬೇಕೆನ್ನುವ ಕರೆಯನ್ನು ಬೆಳಗಾವಿ ಅಧಿವೇಶನ ನೀಡಿತು.
ತಮಗೆ ವಾಸ್ತವ್ಯಕ್ಕೆ ಸಣ್ಣದೊಂದು ಕುಟೀರ ಸಿದ್ಧಪಡಿಸುವಂತೆ ಮಹಾತ್ಮಾ ಗಾಂಧೀಜಿಯವರು ಪತ್ರ ಬರೆದು ತಿಳಿಸಿದ್ದರು. ಆದರೆ 350 ರೂ. ಖರ್ಚು ಮಾಡಿ ಕುಟೀರ ಕಟ್ಟಿದ್ದಕ್ಕೆ ಗಾಂಧೀಜಿಯವರು ಆಕ್ಷೇಪ ವ್ಯಕ್ತಪಡಿಸಿದರು. ಇದು ಅವರ ಸರಳತೆಗೆ ಸಾಕ್ಷಿಯಾಗಿತ್ತು.
ಇದು ಸ್ವಾತಂತ್ರ್ಯ ಹೋರಾಟಕ್ಕೆ ಬಹುದೊಡ್ಡ ಶಕ್ತಿಯನ್ನು ನೀಡಿತು. ಒಟ್ಟಾರೆ ಬೆಳಗಾವಿ ಅಧಿವೇಶನ ಸ್ವಾತಂತ್ರ್ಯ ಚಳವಳಿಗೆ ಬಹುದೊಡ್ಡ ಬಲವನ್ನು ನೀಡಿತು.
ಕಾಂಗ್ರೆಸ್ ಸೇವಾದಳ ಬೀಜಾಂಕುರವಾಗಿದ್ದೇ ಬೆಳಗಾವಿ ಅಧಿವೇಶನದಲ್ಲಿ. ಹರ್ಡಿಕರ್ ಮಂಜಪ್ಪನವರ ನೇತೃತ್ವದಲ್ಲಿ ಸೇವಾದಳ ಸ್ವಚ್ಛತಾ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿತು.
ಅಧಿವೇಶನ ಸಂಘಟಿಸಿದ ರೀತಿ, ಪ್ರತಿಯೊಬ್ಬರ ತೊಡಗಿಸಿಕೊಳ್ಳುವಿಕೆ, ಆರ್ಥಿಕ ಶಿಸ್ತು, ನಾಯಕರ ತ್ಯಾಗ ಇವೆಲ್ಲ ಇಂದಿಗೂ ನಮಗೆ ಆದರ್ಶವಾಗಿ ನಿಲ್ಲುತ್ತವೆ.
ನಮ್ಮ ಕಾಂಗ್ರೆಸ್ ಪಕ್ಷ ಅಂದಿನ ಆಶಯಗಳನ್ನೇ ಮುಂದುವರಿಸಿಕೊಂಡು, ಅದೇ ಮಾರ್ಗದಲ್ಲಿ ಇಂದಿಗೂ ಮುನ್ನಡೆಯುತ್ತಿದೆ. ಜಾತಿ, ಮತ ಭೇದವಿಲ್ಲದೆ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ತತ್ವವನ್ನು ಅಳವಡಿಸಿಕೊಂಡು ಎಲ್ಲರನ್ನೂ ಜೊತೆಯಾಗಿಸಿಕೊಂಡು ಹೋಗುತ್ತಿದೆ.
ಕಾರ್ಯಕ್ರಮ ಆಯೋಜನೆ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮತ್ತು ಸರಕಾರ ಜಂಟಿಯಾಗಿ ಈಗ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವವನ್ನು 2 ದಿನಗಳ ಕಾಲ ಗಾಂಧೀ ಭಾರತ ಹೆಸರಿನಲ್ಲಿ ಅದ್ಧೂರಿಯಾಗಿ ಸಂಘಟಿಸುತ್ತಿದೆ. ಎಲ್ಲರಿಗೂ ಸಂದೇಶ ತಲುಪಿಸಬೇಕು, ಎಲ್ಲರನ್ನೂ ಒಳಗೊಳಿಸಿಕೊಳ್ಳಬೇಕು ಎನ್ನುವ ಆಶಯದೊಂದಿಗೆ ಈ ಅಧಿವೇಶನ ಅರ್ಥಪೂರ್ಣವಾಗಿ, ಪಕ್ಷಾತೀತವಾಗಿ ನಡೆಯುತ್ತಿದೆ.
ನೂರಾರು ರಾಷ್ಟ್ರೀಯ ನಾಯಕರು ಬೆಳಗಾವಿಗೆ ಆಗಮಿಸುತ್ತಿದ್ದಾರೆ, 2 ದಿನ ಬೆಳಗಾವಿಯಲ್ಲೇ ಇರಲಿದ್ದಾರೆ. ಪ್ರಸ್ತುತ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರ ಅಧ್ಯಕ್ಷತೆಯಲ್ಲಿ ಎಐಸಿಸಿ ಅಧಿವೇಶನ, ಸುವರ್ಣ ವಿಧಾನಸೌಧದ ಬಳಿ ಮಹಾತ್ಮಾ ಗಾಂಧೀಜಿಯವರ ಪುತ್ಥಳಿ ಸ್ಥಾಪನೆ, ಸಾರ್ವಜನಿಕ ಸಮಾವೇಶಗಳು ನಡೆಯಲಿವೆ. ಇಡೀ ನಗರ ಜಗಮಗಿಸುವ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಕಳೆದ ಒಂದು ವಾರದಿಂದ ಬೆಳಗಾವಿಯ ಜನ ಕಣ್ತುಂಬಿಕೊಳ್ಳುತ್ತಿದ್ದಾರೆ.
ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ನಮ್ಮ ನಿಮ್ಮೆಲ್ಲರ ಸುಧೈವವೇ ಸರಿ. ಡಿ.27ರಂದು ನಡೆಯಲಿರುವ ಸಮಾವೇಶದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಳ್ಳೋಣ. ಅಧಿವೇಶನ ಈ ದೇಶವನ್ನು ಮುನ್ನಡೆಸಲು ಹೊಸ ಬೆಳಕನ್ನು ಪಸರಿಸಲಿ, ಜನರಿಗೆ ಹೊಸ ಸಂದೇಶಗಳನ್ನು ನೀಡಲಿ ಎಂದು ಆಶಿಸೋಣ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ