ಕರ್ನಾಟಕದಲ್ಲಿ ಏ.18 ಮತ್ತು 23ರಂದು ಮತದಾನ
ಪ್ರಗತಿವಾಹಿನಿ ಸುದ್ದಿ, ನವದೆಹಲಿ
ಲೋಕಸಭೆ ಮತ್ತು 5 ರಾಜ್ಯಗಳ ಚುನಾವಣೆಯ ದಿನಾಂಕಗಳನ್ನು ಚುನಾವಣೆ ಆಯೋಗ ಘೋಷಿಸಿದೆ. ಮೊದಲ ಹಂತದ ಮತದಾನ ಏಪ್ರಿಲ್ 11ರಂದು ನಡೆಯಲಿದ್ದು, ಒಟ್ಟೂ 7 ಹಂತಗಳಲ್ಲಿ ಚುನಾವಣೆ ನಡೆಲಿದೆ.
2ನೇ ಹಂತ ಏ. 18, 3ನೇ ಹಂತ ಏ. 23, 4ನೇ ಹಂತ ಏ. 29, 5ನೇ ಹಂತ ಮೇ 6, 6ನೇ ಹಂತ ಮೇ 12 ಮತ್ತು 7ನೇ ಹಂತ ಮೇ 19ರಂದು ನಡೆಯಲಿದೆ. ಮೇ 23ರಂದು ಮತಗಳ ಎಣಿಕೆ ನಡೆಯಲಿದೆ.
ಕರ್ನಾಟಕದಲ್ಲಿ 2 ಹಂತದಲ್ಲಿ ಮತದಾನ ನಡೆಯಲಿದೆ. ಅಂದರೆ ಏಪ್ರಿಲ್ 18ರಂದು 14 ಸ್ಥಾನಗಳಿಗೆ ಮತ್ತು ಏ. 23ರಂದು ಮತ್ತೆ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಾರ್ಚ್ 25 ಕೊನೆಯ ದಿನ. 28 ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನ.
ಮುಖ್ಯ ಚುನಾವಣೆ ಆಯುಕ್ತ ಸುನೀಲ ಅರೋರಾ ಭಾನುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಚುನಾವಣೆಯ ದಿನಾಂಕಗಳನ್ನು ಘೋಷಿಸಿದರು.
ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಗೆ ಬರಲಿದೆ. ಪ್ರಸಕ್ತ ಲೋಕಸಭೆಯ ಅವಧಿ ಜೂನ್ 3ರಂದು ಮುಕ್ತಾಯವಾಗಲಿದ್ದು, ಅಷ್ಟರೊಳಗೆ ನೂತನ ಸರಕಾರ ಅಸ್ಥಿತ್ವಕ್ಕೆ ಬರಬೇಕಿದೆ. ಎಲ್ಲ ರಾಜ್ಯಗಳಿಗೂ ಭೇಟಿ ನೀಡಿ ಸಿದ್ದತೆಗಳನ್ನು ಪರಿಶೀಲಿಸಲಾಗಿದೆ. ದೇಶಾದ್ಯಂತ 10 ಲಕ್ಷ ಮತಗಟ್ಟೆಗಳಿರಲಿದ್ದು, ಮತಗಟ್ಟೆಗಳ ಸಿದ್ಧತೆಯನ್ನೂ ಪೂರ್ಣಗೊಳಿಸಲಾಗಿದೆ. ಈ ವರ್ಷ 8.6 ಕೋಟಿ ಹೊಸ ಮತದಾರರು ಸೇರಿ ಒಟ್ಟೂ 90 ಕೋಟಿ ಜನ ಮತ ಚಲಾಯಿಸಲಿದ್ದಾರೆ. ಮತಯಂತ್ರದಲ್ಲಿ ಅಭ್ಯರ್ಥಿಗಳ ಫೋಟೋ ಕೂಡ ಇರಲಿದ್ದು, ಎಲ್ಲ ಕಡೆ ವಿವಿ ಪ್ಯಾಟ್ ಗಳನ್ನು ಬಳಸಲಾಗುವುದು ಎಂದರು.
ಚುನಾವಣೆ ಪ್ರಚಾರಕ್ಕೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಮೈಕ್ ಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಭಯಮುಕ್ತ ಚುನಾವಣೆಗೆ ಚುನಾವಣೆ ಆಯೋಗ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ನೆರವನ್ನು ಬಳಸಿಕೊಳ್ಳಲಾಗುತ್ತಿದೆ. ಎಲ್ಲ ಕಡೆ ಸಿಸಿಟಿವಿ ಕ್ಯಾಮರಾ ಬಳಸಲಾಗುತ್ತಿದ್ದು, ಸೂಕ್ಷ್ಮ ಮತಗಟ್ಟೆಗಳಲ್ಲಿ ವೀಡಿಯೋ ಚಿತ್ರೀಕರಣ ಮಾಡಲಾಗುವುದು. ಯಾವುದೇ ರೀತಿಯ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದ್ದು, ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. 24 ಗಂಟೆಯೂ ಚುನಾವಣೆ ಆಯೋಗದ ಸಹಾಯವಾಣಿ ಕೆಲಸ ಮಾಡಲಿದೆ. ಮಾಹಿತಿ ನೀಡಿದವರ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂದು ಅವರು ವಿವರಿಸಿದರು.
(ಪ್ರಗತಿವಾಹಿನಿ ಸುದ್ದಿಯನ್ನು ನಿಮ್ಮ ಪರಿಚಿತರಿಗೆ, ನಿಮ್ಮ ಗ್ರುಪ್ ಗಳಿಗೆ ಶೇರ್ ಮಾಡಿ)