Latest

ಸರಕಾರ ಉತ್ತರ ಕರ್ನಾಟಕದ ಅಭಿವೃದ್ಧಿಯತ್ತ ಗಮನ ಹರಿಸಲಿ -ಸಿದ್ಧರಾಮ ಶ್ರೀ

*

  ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ಮಹಾನಗರದ ಸುವರ್ಣ ವಿಧಾನಸೌಧದಲ್ಲಿ ವಿಧಾನ ಸಭೆಯ ಚಳಿಗಾಲದ ಅಧಿವೇಶನ ನಡೆದಿರುವ ಈ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಕೃಷಿ ಹಾಗು ಶಿಕ್ಷಣ ಕ್ಷೇತ್ರಗಳತ್ತ ಸರಕಾರ ಗಮನ ಹರಿಸಬೇಕು. ಕಳೆದ ಹಲವಾರು ವರ್ಷಗಳಿಂದ ಈ ಭಾಗದ ಅನೇಕ ಯೋಜನೆಗಳು ನೆನಗುದಿಗೆ ಬಿದ್ದುದರಿಂದ ಸರಕಾರವು ಉತ್ತರ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂಬ ಭಾವನೆ ಬಲಗೊಳ್ಳುತ್ತಿದೆ. ಸರಕಾರ ಈ ಭಾಗದ ಎಲ್ಲ ಸಮಸ್ಯೆಗಳ ಬಗ್ಗೆ ಬೇಗನೆ ಪರಿಹಾರ ಕ್ರಮಗಳನ್ನು ಕೈಕೊಂಡು ಈ ಭಾಗದ ಜನರಲ್ಲಿ ಪ್ರತ್ಯೇಕ ಉತ್ತರ ಕರ್ನಾಟಕದ ಭಾವನೆಗಳು ಜಾಗ್ರತಗೊಳ್ಳದಂತೆ ತ್ವರಿತವಾಗಿ ಪ್ರಯತ್ನಿಸಬೇಕೆಂದು ಗದಗ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಶ್ರೀ ಸಿದ್ಧರಾಮ ಮಹಾಸ್ವಾಮಿಗಳು ಕರ್ನಾಟಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಶ್ರೀಗಳು ಪತ್ರಿಕಾ ಪ್ರಕಟಣೆಯಲ್ಲಿ ಉತ್ತರ ಕರ್ನಾಟಕದ ಅನೇಕ ಯೋಜನೆಗಳು ಕಾರ್ಯಗತಗೊಳ್ಳದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉತ್ತರ ಕರ್ನಾಟಕದ ವಿಜಯಪುರ ಮತ್ತು ಬಾಗಲಕೋಟ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳ ಅನೇಕ ಕೆರೆ ಕಾಲುವೆಗಳಿಗೆ ನೀರು ಹರಿಸಿಲ್ಲ. ಕಳಸಾಬಂಡೂರಿ ಮತ್ತು ಮಹದಾಯಿ ಬಗ್ಗೆ ಯೋಚಿಸಲು ಸರಕಾರಕ್ಕೆ ಸಮಯವೇ ಇಲ್ಲದಂತಾಗಿದೆ. ರೈತರು ನೂರಾರು ಸಮಸ್ಯೆಯ ಪರಿಹಾರ ಕಂಡಿಲ್ಲ. ರೈತರ ಗೋಳು ಹೇಳತೀರದು. ಶಿಕ್ಷಣ ಕ್ಷೇತ್ರದ ಸಮಸ್ಯೆಗಳಂತೂ ಪರಿಹಾರವನ್ನೇ ಕಂಡಿಲ್ಲ. ಉತ್ತರ ಕರ್ನಾಟಕದಲ್ಲಿ ಅಧಿಕ ಸಂಖ್ಯೆಯಲ್ಲಿರುವ ಪಾಲಿಟೆಕ್ನಿಕ್ ಹಾಗು ಪದವಿ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸಲಾಗುವುದೆಂದು ಅಧಿಸೂಚನೆ ಹೊರಡಿಸಿತ್ತು. ಈವರೆಗೂ ಆ ಕಾಲೇಜುಗಳಿಗೆ ಅನುದಾನ ದೊರೆತಿಲ್ಲ. 2017ರಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಉನ್ನತ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದ ಉಪಸಮಿತಿ ಸಭೆಯಲ್ಲಿ ಮತ್ತೆ ಈ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸಲು ನಿರ್ಣಯಿಸಲಾಗಿತ್ತು. ಆದರೆ ಇದುವರೆಗೆ ಯಾವುದೇ ಕಾಲೇಜುಗಳಿಗೆ ಅನುದಾನ ದೊರೆತಿಲ್ಲ. ಈ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ನೌಕರರು ಸರಕಾರದ ಅನುದಾನ ನಿರೀಕ್ಷೆಯಲ್ಲಿದ್ದಾರೆ. ಸರಕಾರದ ಅಧಿಸೂಚನೆ, ಸಂಪುಟ ಉಪಸಮಿತಿಯ ತೀರ್ಮಾನಗಳು ಕಣ್ಣೊರೆಸುವ ತಂತ್ರಗಳು ಎಂಬ ಭಾವನೆ ಜನರಿಗೆ ಬಂದಿದೆ. ಈ ನಡುವೆ ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ವಿವೇಚನಾಧಿಕಾರವನ್ನು ಬಳಸಿ ಮೈಸೂರು ಭಾಗದ ಕೆಲವು ಕಾಲೇಜುಗಳಿಗೆ ಅನುದಾನ ಬಿಡುಗಡೆ ಮಾಡಿರುವುದನ್ನು ಬಿಟ್ಟರೆ ಉತ್ತರ ಕರ್ನಾಟಕಕ್ಕೆ ಕವಡೆ ಕಾಸು ಕೂಡ ದೊರೆತಿಲ್ಲ. ಪ್ರಾಥಮಿಕ ಶಿಕ್ಷಣ ಕ್ಷೇತ್ರದ ಪರಿಸ್ಥಿತಿಯಂತೂ ಅಯೋಮಯ. ಕಳೆದ 10-12 ವರ್ಷಗಳಿಂದ ಖಾಸಗಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಿಕೊಳ್ಳಲು ಸರಕಾರ ಅವಕಾಶ ಕಲ್ಪಿಸಿಲ್ಲ. ಅನೇಕ ಸರಕಾರಿ ಪ್ರಾಥಮಿಕ ಶಾಲೆಗಳು ಅದರಲ್ಲೂ ಗಡಿಭಾಗದ ಪ್ರಾಥಮಿಕ ಶಾಲೆಗಳ ದುಃಸ್ಥಿತಿ ಹೇಳತೀರದು. ಅವುಗಳಿಗೆ ಸರಿಯಾದ ಕಟ್ಟಡಗಳಾಗಲಿ, ಮೂಲಭೂತ ಸೌಕರ್ಯಗಳಾಗಲಿ ಇರುವುದಿಲ್ಲ. ಸಚಿವ ಸಂಪುಟದಲ್ಲಿ ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ನೀಡಿಲ್ಲ. ಹೀಗೆ ಎಲ್ಲ ರೀತಿಯಿಂದಲೂ ಉತ್ತರ ಕರ್ನಾಟಕದ ಕಡಗಣನೆಯಾಗುತ್ತಿರುವುದರಿಂದ ಜನರಲ್ಲಿ ಪ್ರತ್ಯೇಕತೆಯ ಭಾವನೆ ಗಟ್ಟಿಗೊಳ್ಳುತ್ತಿದೆ. ಉತ್ತರ ಕರ್ನಾಟಕದ ಬಗ್ಗೆ ಯಾಕಿಷ್ಟು ನಿರ್ಲಕ್ಷ್ಯ ಎಂಬಂತಾಗಿದೆ. ಈ ಹಿಂದೆ ಮುಖ್ಯಮಂತ್ರಿಗಳು ಕೊಟ್ಟ ಭರವಸೆ ಈಡೇರದ ಕಾರಣ ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯದ ಕೂಗು ಅಲ್ಲಲ್ಲಿ ಕೇಳಿಬರುತ್ತಿದೆ. ಕೆಲವೆಡೆ ಪ್ರತ್ಯೇಕ ಧ್ವಜಾರೋಹಣದ ಸಿದ್ಧತೆಗಳೂ ನಡೆದಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಕಾನೂನು ಸುವ್ಯವಸ್ಥೆಗೆ ಭಂಗ ಬರುತ್ತದೆ.
ಈ ಎಲ್ಲ ಮಹತ್ವದ ವಿಷಯದ ಹಿನ್ನೆಲೆಯಲ್ಲಿ ಸರಕಾರವು ಉತ್ತರ ಕರ್ನಾಟಕದ ಕೃಷಿ ಹಾಗು ಶಿಕ್ಷಣ ಮತ್ತಿತರ ಕ್ಷೇತ್ರಗಳ ಈ ಎಲ್ಲ ಸಮಸ್ಯೆಗಳ ತುರ್ತು ಪರಿಹಾರಕ್ಕೆ ಬೇಗ ಕ್ರಮಕೈಕೊಳ್ಳಬೇಕು ಮತ್ತು ಸರಕಾರವು ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿಲ್ಲ ಎಂಬುದನ್ನು ಕೃತಿಯ ಮೂಲಕ ತೋರ್ಪಡಿಸಬೇಕು ಎಂದು ಶ್ರೀಗಳು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button