Latest

ರೈತರಿಗೆ ಕೂಡಲೇ ರಸಗೊಬ್ಬರ ಪೂರೈಸಿ: ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ; ಗೋಕಾಕ : ಗೋಕಾಕ ಮತ್ತು ಮೂಡಲಗಿ ತಾಲೂಕುಗಳಲ್ಲಿ ಈ ಬಾರಿ ಉತ್ತಮ ಮಳೆಯಾಗುತ್ತಿದ್ದು, ರೈತರಿಗೆ ಅಗತ್ಯವಿರುವ ರಸಗೊಬ್ಬರವನ್ನು ಪೂರೈಕೆ ಮಾಡುವಂತೆ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೃಷಿ ಇಲಾಖೆಯಿಂದ ಇತ್ತೀಚೆಗೆ ಗೋಕಾಕದಲ್ಲಿ ಹಮ್ಮಿಕೊಂಡಿದ್ದ “ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ” ಎಂಬ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಬ್ಬು, ಗೋವಿನಜೋಳ, ಸೂರ್ಯಕಾಂತಿ, ಸೊಯಾಬಿನ್ ಬೆಳೆಗಳು ಭಾಗಶಃ ಬಿತ್ತನೆಯಾಗಿದ್ದು, ಇದಕ್ಕೆ ಪೂರಕವಾಗಿರುವ ಯುರಿಯಾ ಮತ್ತು ಡಿಎಪಿ ರಸಗೊಬ್ಬರವನ್ನು ಪೂರೈಕೆ ಮಾಡಿ ರೈತ ಸಮುದಾಯಕ್ಕೆ ನೆರವಾಗಬೇಕೆಂದು ತಿಳಿಸಿದರು.

ಕೃಷಿ ಇಲಾಖೆಯಿಂದ ರೈತರಿಗೆ ಅನುಕೂಲವಾಗುವ ವಿನೂತನ ಯೋಜನೆಗಳಿವೆ. ರೈತರ ಆರ್ಥಿಕಾಭಿವೃದ್ಧಿಗೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಜೊತೆಗೆ ಕೃಷಿ ಇಲಾಖೆ ಹೊಸದಾಗಿ ಜಾರಿಗೆ ತಂದಿರುವ ‘ನನ್ನ ಬೆಳೆ ನನ್ನ ಹಕ್ಕು’ ಧ್ಯೇಯದಿಂದ ತಮ್ಮ ಹೊಲಗಳಲ್ಲಿ ಬೆಳೆದ ಬೆಳೆಯನ್ನು ರೈತರ ಬೆಳೆ ಸಮೀಕ್ಷೆ ಆ್ಯಪ್ ಉಪಯೋಗಿಸಿಕೊಂಡು ತಮ್ಮ ಹೊಲಗದ್ದೆಗಳಲ್ಲಿ ಬೆಳೆಯುವ ಬೆಳೆಗಳ ವಿವರಗಳನ್ನು ಖುದ್ದಾಗಿ ಮೋಬೈಲ್‍ನಲ್ಲಿ ಕೃಷಿಗೆ ಸಂಬಂಧಿಸಿದ ಫೋಟೋಗಳನ್ನು ಅಪ್‍ಲೋಡ್ ಮಾಡಬೇಕು ಎಂದು ಹೇಳಿದರು.

ಕೃಷಿ ಜೊತೆಗೆ ತೋಟಗಾರಿಕೆ, ಅರಣ್ಯ, ಪಶು ಸಂಗೋಪನೆ, ರೇಷ್ಮೆ ಇಲಾಖೆಗಳ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ರೈತರು ಕೇವಲ ಕೃಷಿಯನ್ನು ಅವಲಂಬನೆ ಮಾಡದೇ ಅದರ ಉಪ ಕಸಬುಗಳಾದ ಹೈನುಗಾರಿಕೆ, ಕೋಳಿ ಸಾಕಾಣಿಕೆ, ರೇಷ್ಮೆ ಬೆಳೆಯುವಿಕೆ, ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆದು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು. ಹೊಸ ಕೃಷಿ ತಾಂತ್ರಿಕತೆಗಳನ್ನು ಉಪಯೋಗಿಸಿ ಬೆಳೆಗಳನ್ನು ಬೆಳೆದು ಹೆಚ್ಚಿನ ಇಳುವರಿ ತೆಗೆದು ರೈತರು ಆರ್ಥಿಕವಾಗಿ ಸಬಲರಾಗಬೇಕು. ಸರ್ಕಾರದಿಂದ ರೈತರಿಗೆ ಅನುಕೂಲವಾಗುವ ಎಲ್ಲ ಯೋಜನೆಗಳನ್ನು ಅನುಷ್ಠಾನ ಮಾಡಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ರೈತ ಸಮುದಾಯಕ್ಕೆ ಇದೇ ಸಂದರ್ಭದಲ್ಲಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಮೂಡಲಗಿ ತಹಶೀಲ್ದಾರ ಡಿ.ಜೆ. ಮಹಾತ, ಸಹಾಯಕ ಕೃಷಿ ನಿರ್ದೇಶಕ ಎಂ.ಎಂ. ನದಾಫ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಎಂ.ಎಲ್. ಜನಮಟ್ಟಿ, ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಇನ್ನುಮುಂದೆ ಬೆಳೆವಿಮೆಗೂ ನಾಮಿನಿ ಕಡ್ಡಾಯ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button