Pragativahini Special

*ಕಾಲ ಬದಲಾಗಿದೆ ಅಂತೆಯೇ ನಮ್ಮೊಳಗಿನ ಪ್ರೀತಿಯೂ!!*

ಜಯಶ್ರೀ ಜೆ. ಅಬ್ಬಿಗೇರಿ

ಕೈಯಲ್ಲೇ ಜಗತ್ತಿದೆ ಆದರೂ ಮನಸ್ಸು ಹಳೆಯ ನೆನಪಿನ ಪುಟಗಳ ತಿರುವುತ್ತಿದೆ. ಸಾವಿರ ಗೆಳೆಯರಿದ್ದರೂ ಒಂಟಿತನ ಕಾಡುತ್ತಿದೆ.. ಕಾಲಚಕ್ರದ ಓಟದಲ್ಲಿ ನೈಜತೆಯು ಕರಗುತ್ತಿದೆ. ಬದಲಾವಣೆಯೆಂಬ ಉಸಿರಿನ ಕಣ್ಣಲ್ಲಿ ಮೌನವಿದೆ. ಬದಲಾವಣೆಯ ಭರದಲ್ಲಿ ಬದುಕಿನ ಬಂಧಗಳು ದಾರಿ ತಪ್ಪುತ್ತಿವೆ. ಕಾಲ ಬದಲಾಗಿದೆ ಅಂತೆಯೇ ನಮ್ಮೊಳಗಿನ ಪ್ರೀತಿಯೂ!!

ನಾನು ಇಲ್ಲಿ ಹೇಳ ಹೊರಟಿರುವುದು ಜಗದ ನಿಯಮವಾದ ಬದಲಾವಣೆಯ ಕುರಿತು ಅದು ಕೇವಲ ನಿಯಮವಲ್ಲ ಬದುಕಿನ ಉಸಿರು. ಬದಲಾವಣೆಯೆಂದರೆ ಹಳೆಯದೆನ್ನಲ್ಲ ಮೂಟೆ ಕಟ್ಟಿ ಬೀಸಾಕಿ ಬಿಡುವುದಲ್ಲ. ಗತವನ್ನು ಮರೆಯುವುದೂ ಅಲ್ಲ ಬದಲಾಗಿ ಬದಲಾಗುತ್ತಿರುವ ಹೊಸ ಸವಾಲುಗಳಿಗೆ ಮತ್ತು ಬದುಕಿನ ಹೊಸ ರೂಪಕ್ಕೆ ನಮ್ಮನ್ನು ನಾವು ಮನಸಾರೆ ತೆರೆದುಕೊಳ್ಳುವುದು.

Home add -Advt

ಸೌಂದರ್ಯ

ಜೀವನವೆಂಬುದು ನಿರಂತರವಾಗಿ ಸಾಗುವ ಒಂದು ಸುಂದರ ಪಯಣ. ಇಲ್ಲಿ ಯಾವುದೂ ಶಾಶ್ವತವಲ್ಲ. ಕಷ್ಟಗಳು ಮತ್ತು ಸುಖಗಳು ಕೆಲವೊಂದಿಷ್ಟು ಸಮಯದ ಅತಿಥಿಗಳಿದ್ದಂತೆ. ನೀರು ನಿಂತಲ್ಲೇ ನಿಂತರೆ ಅದು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ. ಅಂದರೆ ಒಂದೇ ಕಡೆ ನಿಂತ ನೀರು ನಿರುಪಯುಕ್ತವಾಗುತ್ತದೆ. ಅದೇ ನದಿಯಾಗಿ ಹರಿಯುತ್ತಿದ್ದರೆ ಅದಕ್ಕೆ ಜೀವಂತಿಕೆ ಇರುತ್ತದೆ. ಪಾವಿತ್ರ್ಯತೆಯನ್ನು ಹೆಚ್ಚಿಸಿಕೊಳ್ಳುತ್ತದೆ. ಕಂಬಳಿಹುಳು ತೀವ್ರವಾದ ಸಂಕಟ ಮತ್ತು ಕತ್ತಲೆಯನ್ನು ಅನುಭವಿಸಿದ ಮೇಲೆಯೇ ಸುಂದರವಾದ ಚಿಟ್ಟೆಯಾಗಿ ಹೊರಹೊಮ್ಮಲು ಸಾಧ್ಯ. ಬದುಕು ಕೊಡುವ ಪ್ರತಿಯೊಂದು ತಿರುವುಗಳನ್ನೂ ಪ್ರೀತಿಯಿಂದ ಆಸ್ವಾದಿಸುತ್ತ ಕೃತಜ್ಞತಾ ಭಾವದಿಂದ ಮುನ್ನಡೆಯಬೇಕೆಂದರೆ ಬದಲಾವಣೆಯನ್ನು ಬದುಕಿನ ಸೌಂದರ್ಯವೆಂದು ಅರಿತು ನಡೆಯಬೇಕು.

ಇಷ್ಟ-ಕಷ್ಟ

ಬದಲಾವಣೆಗೆ ನಾವೆಲ್ಲ ಸದಾ ಸಿದ್ಧರಾಗಿರುವುದಾಗಲಿ ಅಥವಾ ಮುಕ್ತ ಮನಸ್ಸಿನಿಂದ ಸ್ವಾಗತಿಸುವುದು ತುಂಬಾ ವಿರಳ. ಏಕೆಂದರೆ ಅದು ಆರಂಭದಲ್ಲಿ ಕಷ್ಟಕರವೆನಿಸುತ್ತದೆ. ಈಗಾಗಲೇ ನಮಗೆ ಅರಿವಿಲ್ಲದಂತೆ ನಾವೇ ನಿರ್ಮಿಸಿಕೊಂಡಿರುವ ಒಂದು ನಿರ್ಧಿಷ್ಟ ಚೌಕಟ್ಟು ಇರುವ ಹಿತಕರವಾದ ವಾತಾವರಣದಿಂದ ಹೊರಗೆ ಬರುವುದು ಇಷ್ಟದ ಕೆಲಸವಾಗಿರುವುದಿಲ್ಲ. ಉದಾಹರಣೆಗೆ ಹೇಳಬೇಕೆಂದರೆ ಹುಟ್ಟಿ ಬೆಳೆದೂರಿನಲ್ಲಿ ಪರಿಚಿತ ಮುಖಗಳೊಂದಿಗೆ ಕಟ್ಟಿಕೊಂಡಿರುವ ಪುಟ್ಟ ಪ್ರಪಂಚವನ್ನು ಬಿಟ್ಟು ಪರ ಊರಿಗೆ ಹೋಗಲು ಮನಸ್ಸು ಹಿಂಜರಿಯುತ್ತದೆ. ಹಾಗೆಯೇ ನಮಗೆ ಆತ್ಮೀಯರಾದವರು ಇಲ್ಲವೇ ಗೆಳೆಯರು ನಮ್ಮಿಂದ ದೂರವಾದಾಗಲೂ ಮನಸ್ಸು ಭಾರವಾಗುತ್ತದೆ. ಸದಾ ಕಾಳಜಿ ಪ್ರೀತಿ ತೋರುವ ವ್ಯಕ್ತಿಯ ನಡವಳಿಕೆಯಲ್ಲಿ ಬದಲಾದಾಗಲಂತೂ ಮನಸ್ಸು ನೀರಿನಿಂದ ಹೊರತೆಗೆದ ಮೀನಿನಂತೆ ವಿಲವಿಲ ಒದ್ದಾಡುತ್ತದೆ. ಇಂತಹ ಪ್ರಸಂಗಗಳಲ್ಲಿ ಬದಲಾವಣೆ ಒಂದು ಶಾಪದಂತೆ ಮತ್ತು ನೋವನ್ನು ಕೊಡುವ ಪ್ರಕ್ರಿಯೆಯಂತೆ ಭಾಸವಾಗುತ್ತದೆ. ವಾಸ್ತವದಲ್ಲಿ ಬದಲಾವಣೆ ನಮ್ಮನ್ನು ಹಣ್ಣಾಗಿಸುತ್ತದೆ ಬದುಕಿನ ರುಚಿ ಹೆಚ್ಚಿಸುತ್ತದೆ.

ಅವಕಾಶ

ಬದಲಾವಣೆಯ ಹಾದಿಯಲ್ಲಿ ಸಾಗುವಾಗ ನನಗೇಕೆ ಹೀಗಾಗುತ್ತಿದೆ? ಎಂಬ ಪ್ರಶ್ನೆ ಬಾರದೇ ಇರುವುದಿಲ್ಲ.ಅಲ್ಲಿ ನಾವು ಅನೇಕ ಭಾವನಾತ್ಮಕ ಬಿರುಗಾಳಿಗಳನ್ನು ಎದುರಿಸಬೇಕಾಗುತ್ತದೆ. ಹಳೆಯದನ್ನು ಕಳೆದುಕೊಳ್ಳುವ ಭಯ ಹೊಸದನ್ನು ಸ್ವೀಕರಿಸುವಲ್ಲಿನ ಆತಂಕ ನಮ್ಮನ್ನು ಕಾಡುತ್ತದೆ. ಈ ಭಾವನಾತ್ಮಕ ಬಿರುಗಾಳಿಗಳೇ ನಮ್ಮನ್ನು ಗಟ್ಟಿಗೊಳಿಸುತ್ತವೆ. ಬದಲಾಗುವ ಪರಿಸ್ಥಿತಿಗೆ ತಕ್ಕಂತೆ ನಮ್ಮ ಬದುಕನ್ನು ಬದಲಿಸಿಕೊಳ್ಳದಿದ್ದರೆ ಆಲೋಚನೆಗಳಲ್ಲಿ ಬದಲಾವಣೆ ತರದಿದ್ದರೆ ಕಾಲದ ಓಟದಲ್ಲಿ ಹಿಂದಕ್ಕೆ ತಳ್ಳಲ್ಪಡುತ್ತೇವೆ. ಪ್ರಕೃತಿಯನ್ನು ಗಮನಿಸಿದರೆ ನಮಗೆ ಬದಲಾವಣೆ ಬಗೆಗೆ ದೊಡ್ಡ ಪಾಠ ಸಿಗುತ್ತದೆ. ಆ ಪಾಠ ಅರ್ಥೈಸಿಕೊಂಡರೆ ನಮ್ಮನ್ನು ನಾವು ತಿಳಿದುಕೊಳ್ಳಲು ಮರುಶೋಧಿಸಿಕೊಳ್ಳಲು ಅತ್ಯದ್ಭುತ ಅವಕಾಶ ಸಿಗುತ್ತದೆ.

ಮುನ್ನುಡಿ

ಮರದಲ್ಲಿನ ಹಳೆ ಎಲೆಗಳು ಉದುರಿದ ಮೇಲೆ ತಾನೇ ಹೊಸ ಎಲೆಗಳು ಚಿಗುರಲು ಸಾಧ್ಯ. ಹಾಗೆಯೇ ಇದುವರೆಗೂ ಹಿಡಿದಿಟ್ಟುಕೊಂಡ ಹಠಗಳನ್ನು ಹಳೆಯ ಆಲೋಚನೆಗಳನ್ನು ನಕಾರಾತ್ಮಕ ಭಾವನೆಗಳನ್ನು ಬಿಟ್ಟುಕೊಟ್ಟಾಗ ಮಾತ್ರ ನಮ್ಮ ಮನಸ್ಸಿನಲ್ಲಿ ಹೊಸ ಹೊಸ ಆಲೋಚನೆಗಳಿಗೆ ಜಾಗ ಸಿಗುತ್ತದೆ. ಬದಲಾವಣೆಯನ್ನು ದ್ವೇಷಿಸದೇ ಪ್ರೀತಿಯಿಂದ ಸ್ವೀಕರಿಸಿದಾಗ ಜೀವನದಲ್ಲಿ ನವ ವಸಂತದ ಆಗಮನವಾಗುತ್ತದೆ. ಪ್ರತಿ ಬದಲಾವಣೆಯೂ ತನ್ನ ಒಡಲಿನಲ್ಲಿ ಚೆಂದದ ಖುಷಿಯನ್ನು ಅವಿತಿಟ್ಟುಕೊಂಡಿರುತ್ತದೆ. ಬದಲಾವಣೆಯ ಮೇಲೆ ನಂಬಿಕೆ ಇದ್ದರೆ ಧೈರ್ಯದಿಂದ ಹೆಜ್ಜೆ ಇಡಲು ಸಾಧ್ಯ ತನ್ಮೂಲಕ ಹೊಸತನಕ್ಕೆ ಮುನ್ನುಡಿ ಬರೆದು ಸುಂದರ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯ.

ಆದ್ಯತೆ-ಪ್ರಾಮುಖ್ಯತೆ

ಸಮಯ ಸರಿದಂತೆ ಸುತ್ತಮುತ್ತಲಿನ ಸಮಾಜ ಮತ್ತು ಮಾನವೀಯ ಸಂಬಂಧಗಳು ಬದಲಾಗುತ್ತವೆ. ಅಪರಿಚಿತರು ಪರಿಚಿತರಾಗಬಹುದು. ಪರಿಚಿತರು ದೂರ ಸರಿಯಬಹುದು. ಆಪ್ತರು ಸ್ನೇಹಿತರು ಕೈಗೆ ಸಿಗದೇ ಹೋಗಬಹುದು. ಇವುಗಳನ್ನೆಲ್ಲ ನಾವು ನಕಾರಾತ್ಮಕವಾಗಿ ನೋಡದೇ ಪ್ರತಿಯೊಬ್ಬರ ಜೀವನಕ್ಕೂ ತಮ್ಮದೇ ಆದ ಆದತೆಗಳಿರುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನಮ್ಮೊಂದಿಗೆ ಇರುವವರು ಯಾವಾಗಲೂ ಒಂದೇ ರೀತಿ ನಡೆದುಕೊಳ್ಳುವುದಿಲ್ಲ. ಶಾಶ್ವತವಾಗಿ ಉಳಿಯುವುದಿಲ್ಲ ಎಂಬುದನ್ನು ಬದಲಾವಣೆ ಕಲಿಸುತ್ತದೆ. ಕಳೆದು ಹೋದ ಸಂಬಂಧಗಳಿಗಾಗಿ ಅಳುವುದಕ್ಕಿಂತ ಈಗ ನಮ್ಮ ಜೊತೆಗಿರುವ ಜೀವಗಳನ್ನು ಪ್ರೀತಿಸುವುದು ಮತ್ತು ಗೌರವಿಸುವುದು ಮುಖ್ಯ ಎಂಬುದನ್ನು ಹೇಳಿ ಕೊಡುತ್ತದೆ. ಅಷ್ಟೇ ಅಲ್ಲ ಅದು ನಮಗೆ ಯಾರನ್ನು ನಂಬಬೇಕು ಎಷ್ಟು ನಂಬಬೇಕು ಮತ್ತು ಯಾವುದಕ್ಕೆ ಎಷ್ಟು ಪ್ರಾಮುಖ್ಯತೆ ನೀಡಬೇಕು ಎಂಬ ವಿವೇಕವನ್ನು ಕಲಿಸುತ್ತದೆ.

ದೂರ-ದೂರ

ನಾವಿಂದು ಸಾವಿರಾರು ಕಿಲೋಮೀಟರ್ ದೂರದಲ್ಲಿದ್ದರೂ ವಿಡಿಯೋ ಕಾಲ್ ಮೂಲಕ ಪರಸ್ಪರ ಮುಖಾಮುಖಿ ಮಾತನಾಡಬಹುದು. ಅದರೆ ಅದೇ ಸಮಯದಲ್ಲಿ ಒಂದೇ ಮನೆಯಲ್ಲಿದ್ದರೂ ಪರಸ್ಪರ ಮಾತನಾಡದೇ ನಮ್ಮ ನಮ್ಮ ಮೊಬೈಲ್ ಫೋನ್‌ಗಳ ಮುಖವನ್ನು ಬೆರಳುಗಳಿಂದ ತಿಕ್ಕುತ್ತ ಅವುಗಳಲ್ಲಿ ಮುಳುಗಿರುವುದು ವಿಪರ್ಯಾಸ. ಅಂದರೆ ಭೌತಿಕ ದೂರವನ್ನು ಕಡಿಮೆ ಮಾಡಿದ ತಂತ್ರಜ್ಞಾನವು ಭಾವನಾತ್ಮಕವಾಗಿ ದೂರವನ್ನು ಹೆಚ್ಚಿಸುತ್ತಿದೆ. ಈ ಭಾವನಾಕತ್ಮಕ ತಿರುವು ಮಾನವನಿಗೆ ಸ್ವತಂತ್ರ ಬದುಕನ್ನು ನೀಡಿದೆಯಾದರೂ ಒಂಟಿತನವನ್ನು ತಂದಿಟ್ಟಿದೆ. ಹಿರಿಯರ ಮಾರ್ಗದರ್ಶನವಿಲ್ಲದೆ ಯುವಪೀಳಿಗೆ ಬಾಳು ಹಾಳು ಮಾಡಿಕೊಳ್ಳುತ್ತಿದೆ. ಹಬ್ಬ-ಹರಿದಿನಗಳ ಸಡಗರವಿಲ್ಲದೆ ಸಂಸ್ಕೃತಿಯ ಅರಿವಿಲ್ಲದೇ ಕೇವಲ ವಾರಾಂತ್ಯ ಸಂಸ್ಕೃತಿಗೆ ಸೀಮಿತವಾಗುತ್ತಿದೆ. ಹಿಂದಿನ ಕಾಲದಲ್ಲಿ ಅಜ್ಜ, ಅಜ್ಜಿ, ಚಿಕ್ಕಪ್ಪ, ದೊಡ್ಡಪ್ಪ, ಮಾವ, ಅತ್ತೆ, ಎಲ್ಲರೂ ಒಂದೇ ಸೂರಿನಡಿ ಬಾಳುತ್ತಿದ್ದರು. ಹಾಗಾಗಿ ಮಕ್ಕಳಿಗೆ ಸಂಸ್ಕಾರ ಕಲಿಸಲು ಹಿರಿಯರಿದ್ದರು. ಕಥೆ ಹೇಳಲು ಅಜ್ಜ ಅಜ್ಜಿ ಇದ್ದರು. ಇಂದು ಉದ್ಯೋಗ ಮತ್ತು ವೈಯಕ್ತಿಕ ಸ್ವತಂತ್ರದ ಕಾರಣಕ್ಕಾಗಿ ಗಂಡ ಹೆಂಡತಿ ಮತ್ತು ಒಂದೇ ಒಂದು ಮಗುವಿನ ಪುಟ್ಟ ಕುಟುಂಬಗಳು ಹೆಚ್ಚಾಗುತ್ತಿವೆ. ಒಂಟಿತನವನ್ನು ದೂರವಾಗಿಸಲು ಮದುವೆಯಾದವರು ಮದುವೆಯಾದ ಮೇಲೂ ಒಂಟಿತನ ಅನುಭವಿಸುತ್ತಿರುವುದು ಇಂದಿನ ದುರಂತವೇ ಸರಿ. ಸಂಬಂಧಗಳ ಮೌಲ್ಯವನ್ನು ಅರಿತು ಮುನ್ನಡೆಯುವುದು ಇಂದಿನ ಅಗತ್ಯವಾಗಿದೆ.

ಸಂಪರ್ಕದ ಕೊಂಡಿ

ಡಿಜಿಟಲ್ ಯುಗದಲ್ಲಿ ಸಂವಹನ ಹೆಚ್ಚಾದಷ್ಟೂ ಮನಸ್ಸು ದೂರವಾಗುತ್ತಿವೆ. ಜಗತ್ತನ್ನೇ ಜೋಡಿಸುವ ಮೊಬೈಲ್ ಕೈಲಿದ್ದರೂ ನಮ್ಮ ನಡುವಿನ ಭಾವನಾತ್ಮಕ ಸಂಪರ್ಕವನ್ನು ಕ್ಷೀಣಿಸುವಂತೆ ಮಾಡಿದೆ. ಪ್ರೀತಿ ಕೋಪ ತಾಪ ದುಃಖ ಎಲ್ಲವೂ ಕೇವಲ ಮೊಬೈಲ್ ಪರದೆಯ ಮೇಲಿನ ಸ್ಟೇಟಸ್ ಗಳಿಗೆ ಸೀಮಿತವಾಗಿವೆ. ಪರದೆಯನ್ನು ನೋಡಿ ಬದುಕುವ ಈ ಕಾಲವು ಸಂಬಂಧಗಳಲ್ಲಿ ನಿಜವಾದ ಹೂವಿನ ಸುವಾಸನೆ ಬೀರದೇ ಕೃತಕ ಹೂವಿನ ಅಂದ ಮಾತ್ರ ಇಟ್ಟಿದೆ. ಸಂಬಂಧಗಳಲ್ಲಿ ಕೃತಕತೆಯನ್ನು ತಂದಿಟ್ಟಿದೆ. ಎಲ್ಲವೂ ತಕ್ಷಣವೇ ಸಿಗುವ ಸಂಸ್ಕೃತಿಯಲ್ಲಿ ಬಿದ್ದು ತಾಳ್ಮೆಯು ತುಂಬಾ ದುಬಾರಿಯಾಗಿದೆ. ದುರದೃಷ್ಟವಶಾತ್ ಸಂಬಂಧಗಳಿಗೂ ತಕ್ಷಣ ಸಂಸ್ಕೃತಿ ಅಳವಡಿಸುತ್ತಿದ್ದೇವೆ. ಸಣ್ಣಪುಟ್ಟ ಭಿನ್ನಾಭಿಪ್ರಾಯ ಬಂದರೆ ಅದನ್ನು ಸಾವಧಾನವಾಗಿ ಸರಿಪಡಿಸಿಕೊಳ್ಳುವ ಗುಣ ಕಾಣುತ್ತಿಲ್ಲ. ಸಂಕಟ ಬಂದಾಗ ಹೆಗಲು ಕೊಡುವ ಸಂಪರ್ಕದ ಕೊಂಡಿಗಳು ಮುರಿಯುವುದು ಸುಲಭವಾಗಿದೆ. ಬದಲಾವಣೆಯ ಹೆಸರಿನಲ್ಲಿ ಸಂಬಂಧಗಳನ್ನು ಬಲಿ ಕೊಡಬಾರದು ಎಂಬುದನ್ನು ಅರ್ಥೈಸಿಕೊಂಡು ಬದಲಾವಣೆಯ ಹಾದಿಯಲ್ಲಿ ಸಾಗಿದರೆ ರೋಧಿಸುವ ಬದುಕನ್ನು ಮರುಶೋಧಿಸಬಹುದು. ಹೊಸ ಬದಲಾವಣೆಯ ಸುರುಳಿ ಬಿಚ್ಚುವಾಗ ಮನೆ ಮನೆಗಳ ಮನ ಮನಗಳು ಮನ ಬಿಚ್ಚಿ ಮಾತನಾಡಿಕೊಳ್ಳಲಿ ಪರಸ್ಪರ ಪ್ರೀತಿಯ ಭಾಷೆಯಲ್ಲಿ ಅಲ್ಲವೇ?

Related Articles

Back to top button